Thursday, November 23, 2017

ಮರೆತು ಹೋದ ಚರಿತ್ರೆಯ ಪುಟ 'ಕೊಳಲಗಿರಿ'--ರವೀಂದ್ರ ಮುಂಡ್ಕೂರು


-ರವೀಂದ್ರ ಮುಂಡ್ಕೂರು
ಕೊಳಲಗಿರಿ (ಕೊಳಲ್‌ಗಿರಿ) ಉಡುಪಿ ನಗರದ ಉತ್ತರ ದಿಕ್ಕಿನಲ್ಲಿರುವ ಒಂದು ಸಣ್ಣ ಹಳ್ಳಿ.ಕಳೆದ ಶತಮಾನ ಹಾಗೂ ಈ ಶತಮಾನದ ಆದಿಯಲ್ಲಿ ಅತೀಯಾದ ಕಲ್ಲು ಗಣಿಗಾರಿಕೆಯಿಂದ ಇಲ್ಲಿನ ಸಂಪನ್ಮೂಲಗಳು ನಾಶಗೊಂಡಿದ್ದರೂ ಕೂಡ ಈ ಹಳ್ಳಿ ಇಂದೂ ಕೆಂಪು ಕಲ್ಲಿಗೆ ಪ್ರಸಿದ್ಧ.ಒಂದು ಕಾಲದಲ್ಲಿ ಕೊಳಲಗಿರಿಯು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ನಗರ ಆಗಿತ್ತು ಎಂಬುವುದನ್ನು ಇತ್ತೀಚಿನ ಕಾಲಘಟ್ಟದ ಕೆಲವೇ ಕೆಲವು ಜನರಿಗೆ ತಿಳಿದಿರಬಹುದು.ಕ್ರಿ.ಶ 8ನೆಯ ಶತಮಾನದಿಂದ ಕ್ರಿ.ಶ 12ನೇಯ ಶತಮಾನದ ಆದಿಯವರೆಗೆ ಕೊಳಲಗಿರಿಯು ಅಲುಪ ರಾಜವಂಶದ ರಾಜರ ಪ್ರಮುಖ ವ್ಯಾಪಾರ ಕೇಂದ್ರಿತ ನಗರ ಆಗಿತ್ತು.ಆದರೆ ಇಂದು 'ಕೊಳಲಗಿರಿ ಹಳ್ಳಿ' ಪ್ರಸ್ತುತ ಉಡುಪಿ ತಾಲೂಕಿನ ಉಪ್ಪೂರು ಗ್ರಾಮದ ಸಣ್ಣ ಭಾಗ ಅಷ್ಟೆ.

ಭೌಗೋಳಿಕ ಮಾಹಿತಿ:

ಭೌಗೋಳಿಕವಾಗಿ ಕೊಳಲಗಿರಿಯು ಸುವರ್ಣ ನದಿಯ ಉತ್ತರ ದಡದಲ್ಲಿದೆ.ಈ ಪ್ರದೇಶವು ಎತ್ತರದ ಕೆಂಪು ಕಲ್ಲು ಗುಡ್ಡದಿಂದ ರಚಿತವಾಗಿದ್ದು,ಕೆಂಪು ಕಲ್ಲು ಆವೃತ್ತಿತ ಗಿರಿಧಾಮವೂ ಮಣಿಪಾಲದಿಂದ ಕೊಳಲಗಿರಿಯವರೆಗೆ ಉತ್ತರದಿಂದ ಪಶ್ವಿಮಾಭಿಮುಖವಾಗಿ ಹಾಗೂ ದಕ್ಷಿಣದಿಂದ ಪೂರ್ವಭಿಮುಖವಾಗಿ ಹರಡಿದೆ.ಕರವಾಳಿ ಕರ್ನಾಟಕದ ಹಲವು ನದಿಗಳ ಹಾಗೆ ಸುವರ್ಣ ನದಿಯೂ ಕಳೆದ ಸಹಸ್ರಾರು ವರ್ಷಗಳಲ್ಲಿ ತನ್ನ ಸ್ಥಾನದಿಂದ ಹಾಗೂ ಸ್ಥಿತಿಯಿಂದ ಬದಲಾವಣೆಗೊಂಡಿರುತ್ತದೆ.ಅದರಂತೆ ಒಂದು ಕಾಲದಲ್ಲಿ ನಡೆದ ನೈಸರ್ಗಿಕ ಬದಲಾವಣೆಯ ಬಗ್ಗೆ ನಡೆಸಿದ ಅಧ್ಯಯನ ಹಾಗೂ ಪುರಾಣದ ನಂಬಿಕೆಯ ಪ್ರಕಾರ (ಪರಾಶುರಾಮ ಕಾಲದ) ಪ್ರಸ್ತುತ ಪಶ್ವಿಮ ಕರಾವಳಿ ಎರಡು ಸಹಸ್ರಾರು ವರ್ಷಗಳ ಹಿಂದೆ ಕಡಲ ಆಡಿಯಲ್ಲಿತ್ತು ಎನ್ನಬಹುದು.ಇದರ ಅನುಸಾರ ಎರಡು ಸಹಸ್ರಾರು ವರ್ಷಗಳ ಹಿಂದೆ ಕೊಳಲಗಿರಿಯು,ಅಂದರೆ ಸುವರ್ಣ ನದಿಯ ಉತ್ತರ ದಿಕ್ಕು ಒಂದು ಕಡಲತೀರವಾಗಿತ್ತು.

ಕೊಳಲ-ಗಿರಿ

'ಕೊಳಲ-ಗಿರಿ' ಅಂದರೆ 'ಕೊಳಲು ಇರುವ ಗುಡ್ಡದ' ರೂಪಕ. 'ಕೊಳಲಗಿರಿ' ಭೌಗೋಳಿಕವಾಗಿ ಉತ್ತರ ದಿಕ್ಕಿನಲ್ಲಿರುವ ಉಡುಪಿ ನಗರದ  ವಿಸ್ತಾರಿತ ಭಾಗ.ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಮಧ್ವಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣ ದೇವರ ವಿಗ್ರಹವನ್ನು ಪ್ರತಿಷ್ಟಾಪಿಸಿದ ನಂತರ ಅದು ಒಂದು ಪ್ರಮುಖ ಆರಾಧನ ಕೇಂದ್ರವಾಯಿತು.ಅದರಂತೆ ಕೆಲವು ಮೂಲಗಳ ಪ್ರಕಾರ ಕೊಳಲಗಿರಿಯಲ್ಲಿ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸಿದ ತುಂಬಾ ಪ್ರಾಚೀನ ದೇವಾಲಯವಿತ್ತಂತೆ.ಆ ದೇವಾಲಯವು ಎಷ್ಟು ಪ್ರಾಚೀನವಾದ ದೇವಾಲಯವಾಗಿತ್ತು ಅಂದರೆ ಆ ದೇವಾಲಯವಿದ್ದ ಸ್ಥಳವನ್ನು ಖಚಿತವಾಗಿ ಇಂದಿಗೂ ಯಾರಿಂದಲೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಉಡುಪಿ ಪ್ರದೇಶದ ಸ್ಥಳಗಳ ಹೆಸರಿಗೆ ಸಂಸ್ಕೃತ ನಾಮಕರಣ ಶೈಲಿಯು ಆರಂಭವಾದದ್ದು ಉಡುಪಿಯಲ್ಲಿ ಕೃಷ್ಣನನ್ನು ಆರಾಧಿಸುವ ಸಂಸ್ಕೃತಿ ಆರಂಭವಾದಗ,ಅದರಂತೆ 'ಕೊಳಲು' ಎಂಬುವುದು ಕೃಷ್ಣನು ನುಡಿಸುವ ಸಂಗೀತ ಉಪಕರಣ.ಆದರಿಂದ ಕೊಳಲು ಕೃಷ್ಣನ ದೇವಾಲಯದ ಸಲುವಾಗಿ 'ಕೊಳಲಗಿರಿ' ಎಂಬ ಹೆಸರು ಬಂದಿರಬಹುದು.

ಆದರೆ 'ಕೊಳಲ-ಗಿರಿ' ಎಂಬ ಸ್ಥಳನಾಮವನ್ನು ಒಳವಿಮರ್ಷೆಗೆ ಒಳಪಡಿಸಿದಾಗ 'ಕೊಳ್-ಅಲ' ಎಂಬುವುದು ಒಂದು ಬುಡಕಟ್ಟು ಜನಾಂಗ ನೆಲೆಸುವ ಸ್ಥಳ. 'ಅಲ' ಅಂದರೆ ಪ್ರಾಚೀತ ಭಾರತದ ಇತಿಹಾಸದಲ್ಲಿ ಯಾವುದೇ ನದಿಯ ದಡದಲಿ ನೆಲೆನಿಂತ ಒಂದು ಬುಡಗಟ್ಟು ಜನಾಂಗದ ಹೆಸರು.ಆದರಿಂದ ನದಿಯ ತೀರದಲಿ ನೆಲೆನಿಂತ ಒಂದು ನಿರ್ದಿಷ್ಟ ಬುಡಕಟ್ಟು ಜನಾಂಗದ ಕಾರಣದಿಂದಲೂ 'ಕೊಳಲಗಿರಿ' ಎಂಬ ಹೆಸರು ಬಂದಿರಬಹುದು ಎಂದು ಊಹಿಸಲು ಸಾಧ್ಯವಿದೆ.ಏಕೆಂದರೆ 'ಕೊಳಲ'ಎಂಬ ಪದಗಳಿಂದ ಉಲ್ಲೇಕವಾಗುವ ಸಾಕಷ್ಟು ಊರುಗಳು ಈಗಲೂ ನಮ್ಮ ದೇಶದಲ್ಲಿವೆ.

ಕೊಳಲ-ನಕರ

ಎಂಟನೇಯ ಶತಮಾನದ ಒಂದು ಶಾಸನದಲ್ಲಿ ಕೊಳಲಗಿರಿಯು 'ಕೊಳಲ-ನಕರ' ಆಗಿತ್ತು ಎಂದು ತಿಳಿದು ಬರುತ್ತದೆ. 'ನಕರ' ಅಂದರೆ 'ನಗರ'.ವ್ಯಾಪರದ ಪ್ರಮುಖ ಸ್ಥಳ.ವ್ಯಾಪಾರಿಗಳ ಕೇಂದ್ರ ಭಾಗ.ಈ ವ್ಯಾಪಾರಿಗಳು ಆ ಕಾಲಘಟ್ಟದಲ್ಲಿ ಪ್ರಭಾವಶಾಲಿ ಹಾಗೂ ಅರ್ಥಿಕವಾಗಿ ಸದ್ರಡ ವ್ಯಕ್ತಿಗಳು ಆಗಿದ್ದರು.ಇವರು ಆಡಳಿತ ನಡೆಸುವವರಿಗೆ ಹೆಚ್ಚಿನ ತೆರಿಗೆಯನ್ನು ನೀಡುತ್ತಿದ್ದರು ಮಾತ್ರವಲ್ಲದೆ ಆಗತ್ಯವಿದ್ದವರಿಗೆ ಸಾಲವನ್ನೂ ನೀಡುತ್ತಿದ್ದರು.ಈ ವ್ಯಾಪಾರಿಗಳ ಸಂಘವು ಆಗಾಗ ದೇವಾಲಯ ಆವರಣದಲ್ಲಿ ಸಭೆ ಸೇರಿ ತಮ್ಮ ತಂತ್ರ ಹಾಗೂ ವ್ಯವಹಾರಗಳ ಬಗ್ಗೆ ಚರ್ಚಿಸುತ್ತಿದ್ದರು.ಈ ವ್ಯಾಪಾರಿಗಳು ಊರಿನ ಅರ್ಥಿಕತೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿ ನಗರಗಳು ಬೆಳೆಯಲು ತಮ್ಮ ಕೊಡುಗೆಗಳನ್ನು ನೀಡುತ್ತಿದ್ದರು.

ವ್ಯಾಪಾರಿಗಳು ತಮ್ಮ ನಗರದಿಂದ ಅಕ್ಕಿ,ಗೊಡಂಬಿ,ತೆಂಗು,ರೇಷ್ಮೆ.ಮಸಾಲೆ ಪಧಾರ್ಥ,ಹತ್ತಿ,ನೂಲು,ಬೆಲೆ ಬಾಳುವ ಕಲ್ಲು,ಮುತ್ತು,ಹಾಲು,ಹಾಲಿನ ಉತ್ಪನ್ನ,ಮೀನು ಹಾಗೂ ಇನ್ನಿತ್ತರ ಕೈ-ರಚಿತ ಕಲಾಕೃತಿ ಮತ್ತು ಉತ್ಪನ್ನಗಳನ್ನು ಇತರ ಸ್ಥಳಗಳಿಗೆ ರಪ್ತು ಮಾಡುವಂತಹ ವ್ಯವಹಾರವನ್ನು ನಡೆಸುತ್ತಿದ್ದರು.ಹತ್ತಿ ಹಾಗೂ ರೇಷ್ಮೆ ಜವಳಿಗಳನ್ನು ದಕ್ಷಿಣ ಭಾರತದ ಇನ್ನೀತರ ಭಾಗಗಳಿಗೂ ರಪ್ತು ಮಾಡುತ್ತಿದ್ದರು.ರಾಜನ ಕೃಪಾ ಪೋಷಕದಿಂದ,ದಳಾಳ್ಳಿಗಳಿಂದ ಹಾಗೂ ಕೆಲವು ಪ್ರಭಾವಶಾಲಿ ವ್ಯಕ್ತಿಗಳಿಂದ ವ್ಯಾಪಾರಿಗಳು ಅಂದಿನ ಕಾಲದಲ್ಲಿ ಯಶಸ್ವಿಯಾಗುತ್ತಿದ್ದರು.

ಖ್ಯಾತ ಇತಿಹಾಸ ತಜ್ಞ ದಿವಂಗತ ಡಾ|ಪಿ ಗುರುರಾಜ್ ಭಟ್ಟರು ಉದ್ಯಾವರದಲ್ಲಿ ದೊರೆತ ಶಾಸನದ ಬಗ್ಗೆ ತಮ್ಮ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ;

"ಉದ್ಯಾವರದಲ್ಲಿ ದೊರೆತ 8ನೇಯ ಶತಮಾನದ ಶಾಸನವು ಅಲುಪ ರಾಜ ಮಾರಮ್ಮ ಅಲುವರಸನ ಕಾಲಘಟ್ಟದು.ಶಾಸನದ ಪ್ರಕಾರ ಮಾರಮ್ಮ ಅಲುವರಸನು ಉದಯಪುರದ (ಉದ್ಯಾವರ) ನಾಯ್ಗಾ(ನಾಯಕ)ನನ್ನು ಕೊಳಲ-ನಕರಕ್ಕೆ ಕಳುಹಿಸಿ,ಉದಯಪುರದ ಉಸ್ತುವಾರಿಯ ಜೊತೆಗೆ ಕೊಳಲ-ನಕರದ ಉಸ್ತುವಾರಿಯನ್ನು ನಿಭಾಹಿಸಲು ಕೇಳಿಕೊಳ್ಳುತ್ತಾನೆ.ಇದರಿಂದ ಮಾರಮ್ಮ ಅಲುವರಸನಿಗೆ ಕೊಳಲ-ನಕರದಲ್ಲಿಯೂ ರಾಜಧಾನಿ ಇದ್ದಿತ್ತು ಎಂದು ಈ ಶಾಸನದಿಂದ ಸ್ಪಷ್ಟವಾಗುತ್ತದೆ.ಉದ್ಯಾವರದಿಂದ ಉತ್ತರಕ್ಕೆ 10ಕಿ.ಮಿ ದೂರ ಇರುವ ಇಂದಿನ ಕೊಳಲಗಿರಿಯೇ ಅಂದಿನ ಕೊಳಲ-ನಕರವಾಗಿತ್ತು ಎಂದು ಇಲ್ಲಿ ಊಹಿಸಬಹುದು (ಇಂದು ನಗರ ಎಂಬುದ್ದಕ್ಕೆ ಯಾವುದೇ ಸುಳಿವುಗಳಿಲ್ಲ).ಕೆಲವು ಮೂಲಗಳ ಪ್ರಕಾರ ಆ ಸ್ಥಳದಲ್ಲಿ ಕೃಷ್ಣನ ದೇವಾಲಯವಿತ್ತು,ಆದರಿಂದ ಆ ಸ್ಥಳಕ್ಕೆ ’ಕೊಳಲಗಿರಿ’ ಎಂಬ ಹೆಸರು ಬಂದಿದೆ.

ಇತಿಹಾಸ ತಜ್ಞರಾದ ಪ್ರೊ.ಬಾಸ್ಕರ ಆನಂದ್ ಸಾಲೆತ್ತೂರು ಹಾಗೂ ಕೆ.ವಿ.ರಮೇಶ್ ರವರೂ ತಮ್ಮ ಪುಸ್ತಕದಲ್ಲಿ ಇದೇ ಆಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

'ಕೊಳಲ'
'ಕೊಳಲ-ನಕರ'ವು ಇಂದಿನ ಕೊಳಲಗಿರಿಯ ಇತಿಹಾಸದಲ್ಲಿರುವ ಹೆಸರು.ಕರ್ನಾಟಕದಲ್ಲಿ 'ಕೊಳಲ' ಅಥವಾ 'ಕೊಳಲು' ಪದಗಳನ್ನು ಹೊಂದಿರುವ ಸಾಕಷ್ಟು ಪ್ರಾಚೀತ ಊರುಗಳಿವೆ.ಆಕಸ್ಮಿಕವಾಗಿ 'ಕೊಳಲ' (ಕೊಳ್+ಅಲ)ಒಂದು ಪ್ರಕಾರದ ಬುಡಕಟ್ಟು ಜನಾಂಗವು ನೆಲೆಸುವ ಸ್ಥಳದ ಹೆಸರೂ ಹೌದು.

'ಅಲ' ('ಕೊಳ್+ಅಲ' ಎಂಬ ಸ್ಥಳನಾಮದಲ್ಲಿರುವ ಪ್ರತ್ಯಯ) ಅಂದರೆ ನದಿ ತೀರದಲ್ಲಿ ನೆಲೆನಿಂತ ಪ್ರಾಚೀನ ಭಾರತದ ಒಂದು ನಿರ್ದಿಷ್ಟ ಬುಡಕಟ್ಟು ಜನಾಂಗದ ವಸತಿ ಪ್ರದೇಶದ ಹೆಸರು. 'ಅಲ'ಎಂಬ ಶಬ್ದದಿಂದ 'ಜಲ'ಶಬ್ದ ಬರುತ್ತದೆ. ಜಲ,ಅಲ ಅಂದರೆ ನೀರು.

'ಕೊಳ್ಸ್' ಭಾರತದ ಪುರಾತನ ಬುಡಗಟ್ಟು ಜನಾಂಗ.ಒಂದು ಕಾಲದಲ್ಲಿ ಭಾರತದ ಎಲ್ಲಾ ಪ್ರದೇಶದಲ್ಲಿ ಇವರು ಕಂಡುಬರುತ್ತಿದ್ದರು.ಆದರೆ ಇಂದು ಮಧ್ಯಪ್ರದೇಶ, ಛತೀಸ್‌ಗಡ್, ಒರಿಸ್ಸಾ, ಬಂಗಾಳದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಭಾರತದ ವಿವಿಧ ಪ್ರದೇಶದ ೧೪೨೦ ಹಳ್ಳಿಗಳು 'ಕೊಳ್' ಎಂಬ ಬುಡಕಟ್ಟು ಜನಾಂಗ ಪ್ರೇರಿತ ಸ್ಥಳನಾಮಗಳನ್ನು ಹೊಂದಿವೆ.ಕರಾವಳಿಯ ತುಳುನಾಡಿನ ಬಗ್ಗೆ ಹೇಳುವುದಾದರೆ ಕೊಲ್ನಾಡು,ಕೊಲ್ಲೂರು,ಕೊಲ್ಲಮುಗೇರ್ ಇತ್ಯಾದಿ ಹಳ್ಳಿಗಳು ಇಂದೂ ತಮ್ಮ ಹೆಸರಿನಲ್ಲಿ ತಮ್ಮ ಆ ವಿಶೇಷತೆಯನ್ನು ಹೊಂದಿವೆ.

ಐತಿಹಾಸಿಕ ಪ್ರಾಮುಖ್ಯತೆ:
ಅಲುಪ ರಾಜ್ಯವನ್ನು ಅಲುಪ ರಾಜರು ಆಳಿದ್ದರು.ಅಲುಪ ರಾಜ್ಯ ಈಗಿನ ಮಂಗಳೂರಿನ ಪೂರ್ವ ಭಾಗ.ಪ್ರಾಚೀನ ಮಂಗಳೂರಿನ ಅಂದರೆ ಕ್ರಿ.ಶ 100ರವರೆಗೆ ಇದು ಕಡಲ ತೀರವಾಗಿತ್ತು.ಪಶ್ವಿಮ ಅಲುಪ ರಾಜ್ಯ(ಮಂಗಳೂರಿನ) ಮೊದಲು ಕಡಲ ಆಡಿಯಲ್ಲಿದ್ದು ಆರಬ್ಬಿ ಸಮದ್ರದ ಹಿಂಚಲನೆಯಿಂದ ಕ್ರಿ,100ರ ನಂತರ ಬಹಿರಂಗವಾಗಿ ತೋರಲ್ಪಟ್ಟಿತ್ತು(ಸಮುದ್ರದ ನೈಸರ್ಗಿಕ ಹಿಮ್ಮುಕ ಚಲನೆಯಿಂದ ಉತ್ಪತ್ತಿಯಾದ ನಾಡನ್ನು ಪುರಾಣದ ಪ್ರಕಾರ ಪರಶುರಾಮನ ಸೃಷ್ಟಿ ಎಂದು ಹೇಳಲಾಗುತ್ತದೆ).

ನೇತ್ರಾವತಿ ನದಿಯ ಸಲುವಾಗಿ ಮಂಗಳೂರಿನಲ್ಲಿ ಉಂಟಾದ ಮತ್ತಷ್ಟು ಹಾನಿ ಅಲುಪ ರಾಜರಿಗೆ ತಮ್ಮ ರಾಜಧಾನಿಯನ್ನು ಮಂಗಳೂರಿನಿಂದ ಉದ್ಯಾವರಕ್ಕೆ ವರ್ಗಾಹಿಸಲು ಬಲವಂತವಾಗಿ ಪ್ರೇರೆಪಿಸಿತು. 'ಕೊಳಲ-ನಕರ'ದ ಬಗ್ಗೆ ಉಲ್ಲೇಖಿಸುವ ಶಾಸನವು ಅಲುಪ ರಾಜರಿಗೆ ಆರಂಭದಲ್ಲಿ ಉದ್ಯಾವರವನ್ನು ಹೊಸ ರಾಜಧಾನಿಯನ್ನಾಗಿ ಮಾಡುವುದು ಇಷ್ಟವಿಲ್ಲದಿರುದನ್ನು ಸೂಚಿಸುತ್ತದೆ.ಅಲುಪ ರಾಜ ಮಾರಮ್ಮ ಅಲುವರಸನು ತನ್ನ ಕಾಲದಲ್ಲಿ (750-770) ವ್ಯಾಪಾರದ ಕೇಂದ್ರವಾಗಿದ್ದ ಕೊಳಲ-ನಕರವನ್ನು ತನ್ನ ರಾಜಧಾನಿಯನ್ನಾಗಿ ಮಾಡಲು ಇಚ್ಚೀಸಿದ್ದನು.ಕೊಳಲ-ನಕರ ಶಿವಳ್ಳಿಯ(ಒಡಿಪು/ಉಡುಪಿ) ಉತ್ತರದಲ್ಲಿದ್ದು, ಶಿವಳ್ಳಿ ಹಾಗೂ ಉದ್ಯಾವರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಮಾರಮ್ಮ ಅಲುವರಸನ ಕಾಲದಲ್ಲಿ ಪಡೆದುಕೊಂಡಿತು.ಕಾರಣ 'ಕೊಳಲ-ನಕರ' ಒಂದು ವ್ಯಾಪಾರ ಕೇಂದ್ರಿತ ನಗರ ಪ್ರದೇಶವಾಗಿತ್ತು.ಮಾರಮ್ಮ ಅಲುವರಸನ ಕಾಲದಲ್ಲಿ ಕೊಳಲ-ನಕರವು ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡ ಕಾರಣ ಕೊಳಲ ನಕರವು ಕ್ರಿ,8ನೇಯ ಶತಮಾನದಿಂದ ಕ್ರಿ.ಶ 12ನೇಯ ಶತಮಾನದ ಆದಿಯವರೆಗೆ ಕರಾವಳಿಯ ಒಂದು ಪ್ರಮುಖ ವ್ಯಾಪಾರ ಕೇಂದ್ರಿತ ಪ್ರದೇಶವಾಗಿತ್ತು ಎನ್ನಬಹುದು.

ಆದಾಗ್ಯೂ,ಈ ಕಾಲಘಟ್ಟದಲ್ಲಿಯೇ ಇನ್ನೊಂದು ನಗರವು ಸಹ ತನ್ನದೇ ಪ್ರಾಮುಖ್ಯತೆ ಪಡೆದುಕೊಂಡಿತು.ಆ ನಗರವೇ 'ಬಾರ್ಕೂರು'. ಕ್ರಿ.ಶ 1139 (ಇತಿಹಾಸ ತಜ್ಞ ಬಿ.ವಸಂತ ಶೆಟ್ಟಿಯವರು ಕಂಡುಹಿಡಿದ ಪ್ರಕಾರ)ರಲ್ಲಿ ಅಲುಪ ರಾಜ ಕವಿ ಅಲುಪೇಂದ್ರ ತನ್ನ ರಾಜಧಾನಿಯನ್ನು ಉದ್ಯಾವರ/ಕೊಳಲಗಿರಿಯಿಂದ ಬಾರ್ಕೂರಿಗೆ ಬದಲಾಯಿಸಿದನು.

ಕೃತಜತೆಗಳು:
ಈ ವಿಷಯದ ಬಗ್ಗೆ ಬರೆಯಲು ಸೂಚಿಸಿದ ಹಾಗೂ ಅಗತ್ಯ ಮಾಹಿತಿಗಳನ್ನು ಒದಗಿಸಿದ ನನ್ನ ಬ್ಲಾಗಿನ ಓದುಗ ಮೆಲ್ವಿನ್ ಕೊಳಲಗಿರಿಗೆ ವಂದನೆಗಳು.

ಗ್ರಂಥಋಣ:
·      ಡಾ|ಪಿ ಗುರುರಾಜ್ ಭಟ್ಟ್ (2010) History and culture of south India (Discoveries in Coastal Karnataka: Vol 1 Edited by A. Sundara. Dr Padur Gururaja Bhat Memorial trust,  Udupi  ಪುಟ ಸಂಕೆ 18,40,364

·       ಬಿ.ವಸಂತ ಶೆಟ್ಟಿ (2016) Barakuru. A Metropolitan city of antiquity its history and culture. Karnataka Tulu Sahitya Academy.Mangalur  ಪುಟ ಸಂಕೆ 16,296
-ರವೀಂದ್ರ ಮುಂಡ್ಕೂರು
*************************
ರವೀಂದ್ರ ಮುಂಡ್ಕೂರು ತುಳುನಾಡಿನ ಇತಿಹಾಸ ಸಂಶೋಧನ ವಿಮರ್ಷಕರು.ತಮ್ಮ ಮಿತ್ರ ಹೊಸಬೆಟ್ಟು ವಿಶ್ವನಾಥರೊಂದಿಗೆ ಸೇರಿ /https://tulu-research.blogspot.in/ ಎಂಬ ಬ್ಲಾಗಿನಲ್ಲಿ ತುಳುನಾಡಿಗೆ ಸಂಬಂಧಿಸಿದ ಅಧ್ಯಯನ ಬರಹಗಳನ್ನು ಪ್ರಕಟಿಸುತ್ತಾರೆ.ಇತ್ತೀಚಿಗೆ ನಾನು ಕೊಳಲಗಿರಿಯ ಬಗ್ಗೆ ಆವರಲ್ಲಿ ತಮಗೆ ತಿಳಿದಿರುವ ಮಾಹಿತಿಗಳನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಾಗ ಕೂಡಲೇ ಸ್ಪಂದಿಸಿ ಈ ಲೇಖನವನ್ನು ಬರೆದು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ.ಆವರ ಆನುಮತಿ ಕೇಳಿ ಆ ಬರಹದ ಕನ್ನಡ ಆನುವಾದವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ.

ರವೀಂದ್ರ ಮುಂಡ್ಕೂರು’ರವರ ಮೂಲ ಇಂಗ್ಲೀಷ್ ಬರಹ ಓದಲು ಇಚ್ಚಿಸುವವರು  ದಯವಿಟ್ಟು ಈ ಲಿಂಕನ್ನು ಕ್ಲಿಕ್ ಮಾಡಿ;https://tulu-research.blogspot.in/2017/11/393-pages-from-forgotten-history.html

’ಕೊಳಲಗಿರಿ’ಯ ಬಗ್ಗೆ ನನ್ನ ಹಿಂದಿನ ಬರಹವನ್ನು ಓದಲು ಇಚ್ಚಿಸುವವರು ಈ ಲಿಂಕನ್ನು ಕ್ಲಿಕ್ ಮಾಡಿ; https://kolalgiripost.blogspot.in/2017/11/blog-post.html

ಕೊಳಲಗಿರಿಯ ಇನ್ನಷ್ಟು ಮಾಹಿತಿಗಳು ಮುಂದಿನ ಬರಹದಲ್ಲಿ 

ಧನ್ಯವಾದಗಳು

-ಮೆಲ್ವಿನ್ ಕೊಳಲಗಿರಿ


Monday, November 13, 2017

ಉಪ್ಪೂರು ದೀಪೋತ್ಸವ ಹಾಗೂ ಮಹಾತೋಭಾರ ಶ್ರೀ ಸಿದ್ಧಿವಿನಾಯಕ ದೇವಾಲಯ


ಕೆ.ಜಿ ರೋಡಿನಲ್ಲಿರುವ ಸ್ವಾಗತ ಗೋಪುರ
ಈ ಬುಧವಾರ(15/11/2017) ಹಾಗೂ ಗುರುವಾರ(16/11/2017)ಶ್ರೀ ಸಿದ್ಧಿವಿನಾಯಕ ದೇವಾಲಯದ ರಥೋತ್ಸವ ಹಾಗೂ ದೀಪೋತ್ಸವ.ಉತ್ಸವ ಹಾಗೂ ಚರ್ಚ್ ಸಾಂತ್‌ಮಾರಿ ಹಬ್ಬಗಳು ಬಂದಾಗ ನಮಗೆ ಹಳ್ಳಿ ನಿವಾಸಿಗಳಿಗೆ ಏನೋ ಒಂದು ರೀತಿಯ ಸಡಗರ.ಧರ್ಮ ಭೇದಭಾವಗಳನ್ನು ಮರೆತು ನಾವುಗಳು ಊರ ದೀಪೋತ್ಸವ ಅಥವಾ ಚರ್ಚ್ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುವುತ್ತಿರುವುದು ಇಂದು-ನಿನ್ನೆಯಿಂದಲ್ಲ.ಕೆಲವು ತಲೆಮಾರುಗಳಿಂದ ನಿಲ್ಲದ ನದಿಯ ನೀರಿನಂತೆ ಸೋದರತ್ವ ಎಂಬುವುದು ನಿರಂತರವಾಗಿ ನಮ್ಮೊಳಗೆ ಹರಿದು ಬಂದ ಆಸ್ತಿ ಎಂದರೆ ತಪ್ಪಗಲಾರದು.ಮನುಷ್ಯನು ಸದಾ ಆಶಿಸುವುದು ಮನಶಾಂತಿಯನ್ನು.ಆ ಮನಶಾಂತಿಯನ್ನು ಪಡೆಯಲು ಏನಾದರೂ ಒಂದು ಪ್ರಯತ್ನ ಮಾಡುತ್ತಿರುತ್ತಾನೆ.ನಮ್ಮ ಹಳ್ಳಿ ಜನರಿಗೆ ಹೆಚ್ಚಾಗಿ ಮನಶಾಂತಿ ನೀಡುವ ಸ್ಥಳಗಳೆಂದರೆ ದೇವಾಲಯಗಳು,ಚರ್ಚ್‌ಗಳು ಹಾಗೂ ಮಸೀದಿಗಳು.ಆವರವರ ನಂಬಿಕೆಗೆ ಆನುಗುಣವಾಗಿ ಆವರವರಿಗೆ ಬೇಕಾದ ಊರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನಶಾಂತಿಯನ್ನು ಹಾಗೂ ಸಂತೃಪ್ತಿಯನ್ನು ಪಡೆದುಕೊಳ್ಳುತ್ತಾರೆ.ಆದರೆ ನನ್ನ ವಯುಕ್ತಿಕ ಆಭಿಪ್ರಾಯದಂತೆ;ಧಾರ್ಮಿಕ ನಿರ್ಬಂಧವಿಲ್ಲದೆ ಎಲ್ಲರಿಗೂ ಉಲ್ಲಾಸವನ್ನು ನೀಡುವ ಆಚರಣೆ ಎಂದರೆ ಈ ಉತ್ಸವಗಳು.ಉತ್ಸವಗಳು ಯಾವುದೇ ಇರಲಿ,ಅದು ದೀಪೋತ್ಸವ ಆಗಿರಲಿ ಅಥವಾ ಸಾಂತ್‌ಮಾರಿ ಹಬ್ಬವಾಗಿರಲಿ ನಾವು ಹಳ್ಳಿಯ ಜನರು ಪರಸ್ಪರ ಉತ್ಸವಗಳಿಗೆ ಭೇಟಿ ನೀಡಿದಾಗ ವಿವರಿಸಲಾಗದ ವಿಶೇಷ ರೀತಿಯ ಸಂಭ್ರಮವನ್ನು ಕಂಡುಕೊಳ್ಳುತ್ತೇವೆ.ಇದನ್ನೇ ಸೋದರತ್ವ ಆನ್ನುವುದು.ಈ ಜಾತಿ-ಧರ್ಮಗಳನ್ನು ಮೀರಿದ ಸೋದರತ್ವವೇ ನನಗೆ ಇಂದು ಈ ಬರಹವನ್ನು ಬರೆಯಲು ಪ್ರೇರೆಪಿಸಿದ್ದು.

ಇರಲಿ,ಪ್ರತಿವರ್ಷವು ಉಪ್ಪೂರು ಜಾತ್ರೆ ಎಂದಾಕ್ಷಣ ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸುತ್ತವೆ;ನನ್ನ ಪೂಜ್ಯ ತಂದೆಯವರೊಂದಿಗೆ ರಥೋತ್ಸವಕ್ಕೆ ಹೋದ ನೆನಪು,ರಾತ್ರಿ ಒಂದು-ಎರಡು ಘಂಟೆಯ ಹೊತ್ತಿನಲ್ಲಿ ನಡೆಯುವ ರಥೋತ್ಸವಕ್ಕೆ ಎರಡು-ಮೂರು ಘಂಟೆ ಮೊದಲೇ ಹೋಗಿ,ಕಾದು-ಕಾದು ಸುಸ್ತಾಗಿ ಅಲ್ಲಿಯೇ ಹೊಲದಲ್ಲಿ ಮಲಗಿದ ನೆನಪು,ನಮ್ಮ ನೆರಮನೆಯ ಚಾರ(ನಾರಾಯಣ ಎಂದು ಆವರ ಹೆಸರು-ಊರಿನಲ್ಲಿ ಚಾರ ಎಂದೇ ಪ್ರಖ್ಯಾತಿ)ಮಾರಲು ಇಟ್ಟ ತಾಳೆ ಕಣ್ಣು(ಹಣ್ಣು)ಗಳನ್ನು ತಿಂದ ನೆನಪು,ರಾತ್ರಿಯಲ್ಲಿ ವಿದ್ಯುತ್ ದ್ವೀಪದಿಂದ ಆಲಂಕೃತಗೊಂಡ ದೇವಾಲಯದ ದಿವ್ಯನೋಟ,ದ್ವೀಪದ ಬೆಳಕಿನೊಂದಿಗೆ ಸರೋರವದಲ್ಲಿ ತಿರುಗಾಡುವ ಆಲಂಕೃತ ದೋಣಿ(ತೆಪ್ಪೆ),ಸಿಡಿಮದ್ದುಗಳ ಸಿಡಿತ,ವೇಷಭೂಷಣ ನೃತ್ಯ-ಕುಣಿತ,ವಿಶೇಷ ಆತುರತೆ ಹೆಚ್ಚಿಸುವ ಕವಾಯತ್ತುಗಳು,ಮಧ್ಯರಾತ್ರಿಯ ನಂತರ ರಥವನ್ನು ಎಳೆಯುವ ಭವ್ಯನೋಟ...ಆಹಾ! ಹೌದು... ಈ ಎಲ್ಲಾ ವಿಸ್ಮಯಕಾರಿ ನೋಟಗಳು ರಥೋತ್ಸವ ಬಿಟ್ಟು ಇನ್ನೇಲ್ಲಿಯಾದರೂ ಸೀಗುವುದೇ?

ಜಾತ್ರೆಯ ದಿನದಂದು ಆಜ್ಜ,ಅಪ್ಪ ಮತ್ತು ಆಮ್ಮ ಕೊಟ್ಟ ಪುಡಿಕಾಸನ್ನು ಚಡ್ಡಿಯ ಜೇಬಿನಲ್ಲಿಟ್ಟು ಒಬ್ಬನೇ ಹೋದ ನೆನಪು,ಇರುವ ಕೆಲವು ಪುಡಿಕಾಸನ್ನು ಯಾರಾದರೂ ಕದಿಮರು ಕದ್ದರು? ಎಂಬ ಭಯದಿಂದ ಹಣವಿದ್ದ ಜೇಬಿನ ಮೇಲೆ ಒಂದು ಕೈ ಇಟ್ಟು ಜಾತ್ರೆಯಲ್ಲೆಲ್ಲ ಸುತ್ತಾಡಿದ್ದುದೊಡ್ಡ ಜಾತ್ರಾ ಸಂತೆಯಲ್ಲಿ ಎಷ್ಟೊಂದು ಆಟದ ಸಾಮಾನುಗಳು? ಯಾವುದು ಖರೀದಿಸುವುದು, ಯಾವುದು ಬೀಡುವುದು? ಎಂಬ ಗೊಂದಲ.ಕೊನೆಗೆ ಮೂರ್ಖನಾಗಿ ಖರೀದಿಸಿದ ಆಟದ ಕಾರು ಮನೆಗೆ ಸೇರಿದ ಕೆಲವೇ ಘಂಟೆಗಳಲ್ಲಿ ಕೆಟ್ಟುಹೋದ ಪ್ರಸಂಗ,ಐಸ್‌ಕ್ರೀಮ್ ತಿನ್ನಬಾರದೆಂದರೂ ತಿಂದು ಬಂದು ಮರುದಿನ ಆದ ನೆಗಡಿಯ ಸಲುವಾಗಿ ಆಮ್ಮನಿಂದ ತಿಂದ ಬೈಗುಳ.ಮಿಟಾಯಿ ತರಲೆಂದು ಆಮ್ಮ ನೀಡಿದ ಹಣದಲ್ಲಿ ಆಟದ ಸಾಮಾನನ್ನು ಕೊಂಡು ಮನೆಯಲ್ಲಿ ಆವಿತುಕೊಂಡ ದಿನ,ಉತ್ಸವದ ಮಧ್ಯಾಹ್ನ ಚಿನ್ನಕ್ಕನ ಮನೆಗೆ ಹಬ್ಬದೂಟಕ್ಕೆ ಹೋದ ನೆನಪು,ಇವುಗಳೆಲ್ಲ ಇಂದು ನಿನ್ನೆಯ ಘಟನೆಗಳಂತೆ ಇನ್ನೂ ನನ್ನ ಮತಿಪಟಲದಲ್ಲಿ ಹಚ್ಚಹಸುರಾಗಿವೆ.

ಮಹಾತೋಭಾರ ಸಿದ್ಧಿವಿನಾಯಕ ದೇವಾಲಯ

ಹೌದು,ಈ ಎಲ್ಲಾ ಘಟನೆಗಳು ಪ್ರತಿವರ್ಷವು ದೀಪೋತ್ಸವ ಬಂದಾಗ ನೆನಪಾಗುತ್ತವೆ.ಕೆಲವೊಮ್ಮೆ ಇಂತಹ ನೆನಪುಗಳೇ ಮನಸ್ಸಿಗೆ ಒಂದು ರೀತಿಯ ಹಿತವನ್ನು ನೀಡುತ್ತವೆ.ಅದಕ್ಕೆ ಬಾಲ್ಯದ ನೆನಪುಗಳು ವಜ್ರಗಳಿಗಿಂತಲೂ ದುಬಾರಿ. ಇರಲಿ,ಉಪ್ಪೂರು ದೀಪೋತ್ಸವ ಎಂದಾಕ್ಷಣ ಪ್ರತಿವರ್ಷದಂತೆ ಈ ವರ್ಷವೂ ಬಾಲ್ಯದ ನೆನಪುಗಳು ಮರುಕಳಿಸಿರುವ ಜೊತೆಗೆ,ಇತ್ತಿಚಿಗೆ ತುಳುನಾಡಿನ ಇತಿಹಾಸದ ಪುಸ್ತಕದಲ್ಲಿ ಉಪ್ಪೂರು ಸಿದ್ಧಿವಿನಾಯಕ ದೇವಾಲಯದ ಬಗ್ಗೆ ನಾ ಓದಿದ ಕೆಲವು ಸಂಗತಿಗಳು ನೆನಪಿಗೆ ಬರುತ್ತಿವೆ.ಆವುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.


ಮಹಾತೋಭಾರ ಶ್ರೀ ಸಿದ್ಧಿವಿನಾಯಕ ದೇವಾಲಯ

ಶ್ರೀ ಸಿದ್ಧಿವಿನಾಯಕ ದೇವಸ್ಥಾನವು,ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ-ಬ್ರಹ್ಮಾವರದ ಮಧ್ಯೆ ಉಡುಪಿಯಿಂದ 5ಕಿ.ಮೀ ದೂರದಲ್ಲಿ ಕಲ್ಯಾಣಪುರ ಸೇತುವೆ ದಾಟಿದ ಬಳಿಕ ಕೊಳಲಗಿರಿ ರಸ್ತೆ(ಕೆ.ಜಿ ರೋಡ್) ತಿರುವಿನ ಮುಖಾಂತರ ಅರ್ಧ ಕಿ.ಮೀ ಸಾಗಿದಾಗ ಸಿಗುತ್ತದೆ.

ಸಿದ್ಧಿವಿನಾಯಕ ಈ ದೇವಸ್ಥಾನದ ಪ್ರಧಾನ ಆರಾಧ್ಯಮೂರ್ತಿ.ಇಲ್ಲಿಯ ಪ್ರಮುಖ ವೈಶಿಷ್ಟ್ಯವೆಂದರೆ ಶಿವ-ಗಣಪತಿಯರು ಒಂದಾಗಿರುವುದು.ಇಲ್ಲಿರುವ ಶಿವಲಿಂಗದ ಮೇಲೆ ಗಣಪತಿಮಂಡಲವಿದೆ.ಇದು ಬಹಳ ಅಪೂರ್ವವಾದದು.ಈ ವಿಶಿಷ್ಟ ಗಣಪತಿಮಂಡಲವಿರುವ ಶಿವಲಿಂಗವು 8ನೇಯ ಶತಮಾನದೆಂದು ಖ್ಯಾತ ಇತಿಹಾಸ ತಜ್ಞ ದಿ.ಡಾ|ಪಿ.ಗುರುರಾಜ್ ಭಟ್ಟರು ಆಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹೀಗೆ ವೇದೋಕ್ತವಾಗಿ ಗಣಪತಿಚಕ್ರ ಸಹಿತ ಶಿವಲಿಂಗ ಪ್ರತಿಷ್ಟಾಪನೆಗೊಂಡು ಪೂಜೆಗೊಳ್ಳುವುದು ಈ ದೇವಾಲಯಲ್ಲಿ ಮಾತ್ರ ಎಂದು ಹೇಳುತ್ತಾರೆ.

ಈ ದೇವಾಲಯದ ಗರ್ಭಗುಡಿಯ ದಕ್ಷಿಣ ಬದಿಯ ಪೌಳಿಯ ಮೂಲೆಗಳಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಗುಡಿವಿದೆ.ದೇವಾಲಯದ ಮುಂಭಾಗದಲ್ಲಿ ಬ್ರಹ್ಮ ಹಾಗೂ ಪರಿವಾರ ದೇವತೆಗಳ ಗುಡಿಯಿದೆ.ಆಗ್ನೇಯ ದಿಕ್ಕಿನಲ್ಲಿ ಒಲಗ ಮಂಟಪವಿದೆ.ಈಶಾನ್ಯ ಭಾಗದಲ್ಲಿ 'ಸಿದ್ಧಿ ಸರೋವರ'ವಿದೆ. ದೇವಾಲಯದಲ್ಲಿ ಆರಾಧಿಸಲ್ಪಡುತ್ತಿರುವ ಶ್ರೀ ಸಿಧ್ಧಿವಿನಾಯಕ ದೇವರ ಶಿಲಾವಿಗ್ರಹವು ಸುಮಾರು ಕ್ರಿ.ಶ 13ನೇಯ ಶತಮಾನಕ್ಕೆ ಸರಿ ಹೊಂದುತ್ತದೆಂದು ಇತಿಹಾಸ ತಜ್ಞ ದಿವಂಗತ ಡಾ|ಪಿ.ಗುರುರಾಜ್ ಭಟ್ಟರು ಹಾಗೂ ಕೆ.ಜೆ ವಸಂತ ಮಾಧವರು ಆಭಿಪ್ರಾಯ ಪಟ್ಟಿರುತ್ತಾರೆ.ಇಲ್ಲಿರುವ ಶಿಲಾಶಾಸನಗಳಿಂದ ಶ್ರೀ ದೇವಳಕ್ಕೆ ವಿಜಯ ನಗರದ ಆರಸನಾದ ಬುಕ್ಕರಾಯ ಮತ್ತು ಆಚ್ಯುತರಾಯ ಇವರ ಆಳ್ವಿಕೆಯ ಕಾಲದಲ್ಲಿ ಭೂಮಿಯನ್ನು ಉಂಬಳಿ ಬಿಟ್ಟಿರುದಾಗಿ ತಿಳಿದು ಬರುತ್ತದೆ.

ಶ್ರೀ ಗಂಗಾಧರೇಶ್ವರ ಸ್ವಾಮಿ
ಈ ದೇವಾಲಯದ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪ ಸುಮಾರು 73ವರ್ಷಗಳ ಹಿಂದೆ ನವೀಕರಣಗೊಂಡಿದೆ.ಆನಂತರ ದೇವಳದ ಹೆಬ್ಬಾಗಿಲುಆಂತಸ್ತುರಚನೆಒಳಪ್ರಾಂಗಣಕ್ಕೆ ಒರೆಕಲ್ಲು ಹಾಸುವಿಕೆಪರಿವಾರ ದೇವತೆಗಳ ನೂತನ ಕಟ್ಟಡವಾಲಗ ಮಂಟಪಕೆರೆ ನವೀಕರಣಶಿಲಾಮಯ ಮುಖದ್ವಾರ ಮುಂತಾದ ಆಭಿವೃದ್ಧಿ ಕಾರ್ಯಗಳು ನಡೆದಿವೆ.1994ರ ಆವಧಿಯಲ್ಲಿ ಶ್ರೀ ಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿ ಅಷ್ಟಬಂಧ  ಪೂರ್ವಕ ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ,ಸಹಸ್ರ ನಾರಿಕೇಳ ಮಹಾಯಾಗ,ರಥೋತ್ಸವ ವಿಜೃಂಭಣೆಯಿಂದ ಜರಗಿದ್ದವು.ಈ ಸಂಧರ್ಭದಲ್ಲಿ ನವೀಕರಣಗೊಂಡ 'ಸಿದ್ಧಿ ಸರೋವರ' ಉದ್ಘಾಟನೆಗೊಂಡಿತು.ಈ ದೇವಸ್ಥಾನದಲ್ಲಿ ಪ್ರತಿವರ್ಷ ಮಹಾಚೌತಿ, ರಂಗಪೂಜೆ, ಸಂಕಷ್ಟಹರ ಚತುರ್ಥಿ, ಸೋಣಂತಿ ತಿಂಗಳಲ್ಲಿ ವಿಶೇಷ ಪೂಜೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ತೇಪೋತ್ಸವ, ರಥೋತ್ಸವ ಹಾಗೂ ಕಾರ್ತಿಮಾಸ ಆಚರಣೆಗಳು ವಿಜೃಂಭಟೆಯಿಂದ ಜರಗುತ್ತವೆ.

ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಈ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಬಲಿ,ಬ್ರಹ್ಮಪರಿವಾರಕ್ಕೆ  ಪುನಃ-ಪ್ರತಿಷ್ಟಾ ವಿಧಿ,ನವಕ ಪ್ರಧಾನ,ಶ್ರೀ ಗಂಗಾಧರೇಶ್ವರ ದೇವರ ಪ್ರತಿಷ್ಠೆ,ಕಲಾಭಿವೃದ್ಧಿ ಹೋಮ,ಕಲಶಾಭಿಷೇಕ,ಶ್ರೀ ಸಿದ್ಧಿ ವಿನಾಯಕರಿಗೆ ದೇವಸ್ಥಾನದಲ್ಲಿ ವಾಸ್ತು, ರಾಕ್ಷೋಘ್ನ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಬ್ರಹ್ಮಾಕಲಾಶಭೀಷೆಕ, ಸಹಸ್ರಾ ನಾರಿಕೇಳ ಗಣಯಾಗ, ರಂಗಪೂಜೆ, ರಥೋತ್ಸವ ಆಚರಣೆ ಜರಗಿದ್ದವು.

 ಐತಿಹಾಸಿಕ ಉಪ್ಪೂರು ಶಾಸನ

ಐತಿಹಾಸಿಕ ಉಪ್ಪೂರು ಶಾಸನ
ಇತಿಹಾಸದ ಉಪ್ಪೂರು ಶಾಸನದ ಬಗ್ಗೆ ಹೇಳಲೇಬೇಕು.ಉಪ್ಪೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಜಯನಗರದ ಆರಸ ಆಚ್ಯುತರಾಯನ ಆಳ್ವಿಕೆಯ ಕಾಲದ ಶಾಸನವೊಂದಿದೆ. ಇದರಲ್ಲಿ ಕೊಂಡಪ್ಪ ಒಡೆಯನು ಆ ಕಾಲದಲ್ಲಿ ಬಾರಕೂರಿನ ರಾಜ್ಯಪಾಲವಾಗಿದ್ದುದಾಗಿ ಹೇಳಿದೆ.1536ರಲ್ಲಿ ಆಚ್ಯುತರಾಯನಿಂದ ಬಾರಕೂರು ಹಾಗೂ ಮಂಗಳೂರು ರಾಜ್ಯಗಳ ಆಡಳಿತ ಅಧಿಕಾರವನ್ನು ಪಡೆದುಕೊಂಡ ಸುಂಕಣ್ಣರಾಯ,ಬಾರಕೂರು ರಾಜ್ಯಕ್ಕೆ ಕೊಂಡಪ್ಪ ಒಡೆಯನನ್ನು ರಾಜ್ಯಪಾಲನಾಗಿ ನೇಮಿಸುತ್ತಾನೆ.
ಈ ಬಾರಕೂರಿನ ರಾಜ್ಯಪಾಲ ಕೊಂಡಪ್ಪ ಒಡೆಯನು ಉಪ್ಪೂರು ಗ್ರಾಮದ ಮೇಲೆ ರಾಜಕಾರ್ಯ ಮಾಡಬೇಕಾಗಿ ಬಂದಾಗ ಅವನು ಸೈನ್ಯ ಸಹಿತವಾಗಿ ಉಪ್ಪೂರು ಗ್ರಾಮದ ಮೇಲೆ ದಾಳಿ ಮಾಡುವನು.ಜನರ ಪ್ರತಿಭಟನೆಯಿಂದಾಗಿ ತೆರಿಗೆಯನ್ನು ಬಲತ್ಕಾರವಾಗಿ ವಸೂಲು ಮಾಡವುದು ಈ ದಾಳಿಯ ಉದ್ದೇಶವಾಗಿರುತ್ತದೆ.ಆದರೆ ಈ ದಾಳಿಯ ವೇಳೆಯಲ್ಲಿ ಪುರುಷರ ಪ್ರಾಣ ಹಾಗೂ ಸ್ತ್ರೀಯರ ಮಾನ ಹಾನಿಯಾಗುತ್ತದೆ.ಇದಕ್ಕೆ ಪರಿಹಾರವಾಗಿ ರಾಜ್ಯಪಾಲ ಕೊಂಡಪ್ಪ ಒಡೆಯನು ಗ್ರಾಮ ನಿವಾಸಿಯಾದ ಶಿವ ಕೇಕುಡೆ ಎಂಬ ವ್ಯಕ್ತಿಗೆ ಅಲ್ಲಿ ತೆರಿಗೆಯಿಂದ ಬಂದ ಹಣವನ್ನು ನೀಡುತ್ತಾನೆ.

ಐತಿಹಾಸಿಕ ಉಪ್ಪೂರು ಶಾಸನ ವಿವರಣೆ
ಹೀಗೆ ಊರಿನವರ ಮೇಲೆ ನಡೆಸಿದ ಆತ್ಯಚಾರದಿಂದ ರಾಜ್ಯಪಾಲ ಪದವಿಯನ್ನು ಕೊಂಡಪ್ಪ ಒಡೆಯನು ಕಳೆದುಕೊಳ್ಳುತ್ತಾನೆ.ಆತನ ನಂತರ ಆ ಪದವಿ ಪಡೆದ ಪಂಡರಿದೇವ ಒಡೆಯನ ಕಾಲದ ಕೊಟೇಶ್ವರ ಶಾಸನವೊಂದರಲ್ಲಿ ಕೊಂಡಪ್ಪ ಒಡೆಯ ಸಾಮಾನ್ಯ ದಾನಿಯಾಗಿ ಮಾತ್ರ ಕಂಡು ಬರುತ್ತಾನೆ.

ಉಪ್ಪೂರು ಶಾಸನವು ರಾಜಕೀಯ ಇತಿಹಾಸ,ವಿಜಯನಗರದ ಪ್ರಾಂತೀಯ ಧೋರಣೆ ಮತ್ತು ಇದಕ್ಕೆ ಸ್ಥಳೀಯ ಪ್ರತಿಕ್ರಿಯೆ ಈ ವಿಷಯಗಳ ಮೇಲೆ ಬೆಳಕು ಚೆಲ್ಲುವ ಆಮೂಲ್ಯವಾದ ಆಕರವಾಗಿದೆ.

 ದೇವಸ್ಥಾನದ ಬಗ್ಗೆ ಪ್ರಚಲಿತದಲ್ಲಿರುವ ಪುರಾಣ ಕಥೆ:

ಈ ಕ್ಷೇತ್ರದ ಬಗ್ಗೆ ಪ್ರಚಲಿತವಿರುವ ಒಂದು ಪುರಾಣದ ಕಥೆಯ ಪ್ರಕಾರ ದ್ವಾರಕೆಯಲ್ಲಿ ಗೋಪಿಕಾ ಸ್ತ್ರೀಯರಿಂದ ಆರಾಧಿಸಲ್ಪಡುತ್ತಿದ್ದ ಈ ಗಣಪತಿ ಮೂರ್ತಿಯು ಸ್ವರ್ಣ ನದಿಯ ಪ್ರಾರ್ಶ್ಚ ಭಾಗದಲ್ಲಿ ಪ್ರಾಣಿಪೀಠ, ಶೀಲಾಶಾಸನ ಸಮೇತವಾಗಿ ಗೋಚರಿಸಲ್ಪಟ್ಟು ಆದನ್ನು ಯಾರಿಂದಲೂ ಮೇಲೆ ತೆಗೆಯಲು ಆಸಾಧ್ಯವಾದಗ ಪವಾಡ ಪುರುಷರೊರ್ವರು ಅದನ್ನು ಮೇಲೆ ತಂದು ಗ್ರಾಮಸ್ಥರ ನೆರವಿನಿಂದ ಪ್ರತಿಶ್ಟಾಪಿಸಿದನೆಂದು ಹೇಳಲಾಗುತ್ತದೆ.

ಗ್ರಂಥಋಣ:

1. ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಡಾ| ಪಿ.ಎನ್.ನರಸಿಂಹಮೂರ್ತಿ, ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು, ಪುಟ ಸಂಕೆ 299-300
2. ಡಾ|ಪಿ.ಗುರುರಾಜ್ ಭಟ್ಟ್ Book of Antiquities of South Canara ಪುಟ ಸಂಕೆ-6
3. ಜೀರ್ಣೊದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಮನವಿ ಪತ್ರಿಕೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ
4.ತುಳುನಾಡಿನ ಆರಸರ ಕಾಲದ ಶಾಸನಗಳು ಹಾಗೂ ವಿಶ್ಲೇಷಣೆಗಳು.

5. ಚಿತ್ರ ಕೃಪೆ:  ಗೂಗಲ್ ಅಂತರ್ಜಾಲ